Untitled Document
Sign Up | Login    
ಒಂದು ಸೇರು ಗೋದಿ ( 1 )

ರಮಣ ಸೂರು ನಿಟ್ಟಿಸುತ್ತ ಕುಳಿತುಕೊಂಡ. ಮನೆಯಲ್ಲಿ ಹೆಪ್ಪುಗಟ್ಟಿದ ಮೌನ. ಅಪ್ಪನ ಕ್ಷೀಣ ನರಳಿಕೆ ಮಾತ್ರ ನೀರವತೆಯನ್ನು ಕೊರೆದುಕೊಂಡು ಎದೆಯನ್ನು ಕಲಕುತ್ತಿತ್ತು. ಮೊನ್ನೆಯಿಂದ ಯಾರಿಗೂ ಒಪ್ಪತ್ತು ಗಂಜಿಯೂ ಇರಲಿಲ್ಲ.
ನೀರೇ ಆಹಾರ. ದಿನಕ್ಕೊಮ್ಮೆ ಗಂಜಿ ಕಾಯಿಸಿಕೊಂಡು ಕುಡಿದಿದ್ದರೂ ಬದುಕಬಹುದಿತ್ತು. ತಂಗಿ ನಿಮ್ಮಿ ಹದಿನೈದು ದಿನಗಳ ಹಿಂದೆ ಹಸಿವಿನಿಂದ ತೀರಿಕೊಂಡಿದ್ದಳು. ಅಪ್ಪನೂ ಏಳಲಾರದೆ ಮಲಗಿದ್ದ. "ಹೇಗಾದರೂ ಮಾಡಿ ಒಂದು ಸೇರು ಗೋದಿ ಕಡಿಯನ್ನಾದರೂ ತಂದರೆ ಗಂಜಿ ಕಾಯಿಸಿ ಹಾಕುತ್ತಿದ್ದೆ. ಬದುಕಬಹುದಿತ್ತು, ದೇವರಿಗೆ ನಾವು ಯಾರೂ ಬದುಕುವುದು ಬೇಡವೆಂದು ಕಾಣುತ್ತದೆ" ಎಂದು ಕಣ್ಣೀರು ಮಿಡಿಯುತ್ತ ಅಪ್ಪನ ಬಳಿಯೇ ಕುಳಿತುಕೊಂಡಿದ್ದಳು.
ಆದರೆ ಹೇಗೆ ತರುವುದು? ಎಲ್ಲಿಂದ ತರುವುದು? ರಮಣ ಹತಾಶನಾಗಿದ್ದ. ಮನಸ್ಸು ಶೂನ್ಯವಾಗಿತ್ತು.
"ಬೇರೆಲ್ಲಾದರೂ ಹೋಗಿ ಕೂಲಿ ನಾಲಿ ಮಾಡಿ ಜೀವನ ಮಾಡೋಣ. ಕಷ್ಟವಾದರೂ ಹೊಟ್ಟೆಗಿಲ್ಲದೇ ಸಾಯುವ ಪರಿಸ್ಥಿತಿಯಾದರೂ ಬರಲಿಕ್ಕಿಲ್ಲ" ಎಂದು ಹೇಳುತ್ತಲೇ ಬಂದಿದ್ದ ರಮಣ.
"ಬೇಡ ಮಗೂ ನಾವಿಲ್ಲೇ ಹುಟ್ಟಿದ್ದೇವೆ. ಇಲ್ಲೇ ಸಾಯೋದು. ಏನಾಗ್ತದೋ ಆಗಲಿ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೇ? ನನ್ನ ಅಪ್ಪ, ಅಜ್ಜ ಇದೇ ಮನೇಲಿ ಬಾಳಿದರು. ಈ ಮಾವಿನ ಮರ ಅಜ್ಜನೇ ನೆಟ್ಟದ್ದಂತೆ. ಹತ್ತು ಗುಂಟೆ ಹೊಲ ಇದೂ ನಮ್ಮ ಮನೆತನದ ಆಸ್ತಿ. ಇದನ್ನೆಲ್ಲ ಬಿಟ್ಟು ಎಲ್ಲಿ ಹೋಗುವುದು ? ಹೇಗೆ ಹೋಗುವುದು?ಎಂದು ಅಪ್ಪ ಊರು ಬಿಡಲು ಒಪ್ಪಲೇ ಇಲ್ಲ.
ಈ ಊರು: ಪಶ್ಚಿಮ ಬಂಗಾಳದ ಒಂದು ಹಳ್ಳಿ. ಅಮಾಲಾಸೋಲ್‌ನಲ್ಲಾದರೂ ಎಲ್ಲರೂ ಬಡವರೇ. ಕೆಲವರು ಒಂದು ಹೊತ್ತಿಗೆ ಊಟ ಮಾಡಿದರೆ ಕೆಲವರು ಎರಡು ಹೊತ್ತು. ಅಷ್ಟೇ ವ್ಯತ್ಯಾಸ. ಮನೆಯಲ್ಲಿ ಅಪ್ಪ ಅಮ್ಮ ತಂಗಿ ಆತ ನಾಲ್ಕೇ ಜನ. ಆದರೂ ಕಿತ್ತು ತಿನ್ನುವ ಬಡತನ. ಜಮೀನಿನಲ್ಲಿ ಬೆಳೆದ ಗೋದಿ, ತರಕಾರಿ ಇನ್ನೊಂದೆಂದು ಮೂರು ತಿಂಗಳು ಸಾಕು. ಊರಿನಲ್ಲಿ ಕೂಲಿ ಕೊಡುವವರಿಲ್ಲ. ಕಾಡಿನಿಂದ ಕಟ್ಟಿಗೆ ಒಡೆದುಕೊಂಡು ತಂದು ಪೇಟೆಗೆ ಹೋಗಿ ಮಾರಿ ಬಂದಷ್ಟು ಹಣದಲ್ಲಿ ಗೋದಿ, ಪ್ಯಾಜ, ಉಪ್ಪು ಬೇಳೆ ತರುವುದು. ಪೇಟೆಗೆ ಹೋಗುವುದೆಂದರೂ 25-30 ಕಿ.ಮೀ. ನಡೆಯಲೇಬೇಕು.
ಬದುಕಿದರೂ ಇಲ್ಲೇ ಸತ್ತರೂ ಇಲ್ಲೇ "ಜನನೀ ಜನ್ಮ ಭೂಮಿ ಸ್ವರ್ಗಕ್ಕಿಂತಲೂ ಮೇಲು..'' ಎಂದು ಹಠ ಹಿಡಿದು ಕುಳಿತ ಅಪ್ಪ ಈಗ ಸೋತು ಮಲಗಿದ್ದಾನೆ. ಹಸಿವು ಆತನನ್ನೂ ನುಂಗಿ ಹಾಕುತ್ತಲಿದೆ. ತಂಗಿಯ ಸಾವಿನ ಸೂತಕವೇ ಕಳೆದಿಲ್ಲ. ಒಂದಿಷ್ಟು ಗೋದಿ ಸಿಕ್ಕಿದ್ದರೆ ಅಪ್ಪ ಬದುಕಿಕೊಳ್ಳುತ್ತಿದ್ದ. ಹಾಗಂತ ಸ್ವಾಭಿಮಾನ ಬಿಟ್ಟು ಯಾರ ಬಳಿಯೂ ಅಂಗಾಲಾಚುವುದು ಅವರ ಜಾಯಮಾನದಲ್ಲಿಯೇ ಬಂದಿಲ್ಲ. ರಮಣನ ಕಣ್ಣಿಂದ ಚಿಳ್ಳನೇ ನೀರು ಚಿಮ್ಮಿತು. ಸಾಯಲಿಕ್ಕಾಗಿಯೇ ಹುಟ್ಟೂರಿನಲ್ಲಿ ಇರಬೇಕೆ? ಇಡೀ ದೇಶವೇ ನಮ್ಮದಲ್ಲವೆ? ನಮ್ಮ ಅಮಾಲಾ ಸೋಲ್‌ನಲ್ಲಾದರೋ ಎಲ್ಲರೂ ಇಂದಿದ್ದರೆ ನಾಳೆಗಿಲ್ಲ ಎಂಬ ಸ್ಥಿತಿಯವರೇ. ಆದರೂ "ಊರು ಬಿಟ್ಟು ಹೋಗುವುದು ಬೇಡ, ನಮ್ಮಿಂದಾದ ಎಲ್ಲ ಸಹಾಯ ಮಾಡುತ್ತೇವೆ'' ಎಂದೇ ಎಲ್ಲರೂ ಹೇಳುತ್ತಾರೆ. ಎಲ್ಲರೂ ಶಕ್ತಿ ಮೀರಿ ಸಹಾಯ ಮಾಡಿದ್ದರಾದರೂ ನಿತ್ಯ ಸಾಯುವವರಿಗೆ ಅಳುವವರಾರು? ಎನ್ನುವಂತಾಗಿದೆ. ಇಂತಹ ಕಿತ್ತು ತಿನ್ನುವ ಬಡತನದ ಊರುಗಳು ಅದೆಷ್ಟಿವೆಯೋ!
ಸ್ವಾತಂತ್ರ ಬಂದು ಅರ್ಧ ಶತಮಾನವೇ ಕಳೆದರೂ ನನ್ನೂರು ಇನ್ನೂ ಹಾಗೆಯೇ ಇರಬೇಕಿತ್ತೇ? ಒಂದು ರಸ್ತೆಯಿಲ್ಲ, ಒಂದು ಆಸ್ಪತ್ರೆಯಿಲ್ಲ, ಹೋಗಲಿ ಒಂದು ಶಾಲೆ ಕೂಡಾ ಇಲ್ಲ, ಬಸ್ಸ ಬರುವುದಂತೂ ದೂರವೇ ಉಳಿಯಿತು. ಯಾವ ದಿಕ್ಕಿಗೆ ಹೋದರೂ 25-30 ಕಿ.ಮೀ. ನಡೆದೇ ಹೋಗಬೇಕು. 20 ರ ಹರೆಯದ ನಾನು ಅನಕ್ಷರಸ್ಥನಾಗಿಯೇ ಉಳಿಯಬೇಕಿತ್ತೆ? ನಮ್ಮ ಹಳ್ಳಿಯನ್ನು ಎಲ್ಲರೀ ಮರೆತಿದ್ದಾರೆ. ಉದ್ಯೋಗ ಸೃಷ್ಟಿಯನ್ನಂತೂ ಯಾರೂ ಮಾಡಲಿಲ್ಲ..

ವಿದ್ಯುದ್ದೀಪ ಹಾಳಾಗಲಿ, ಸೀಮೆ ಎಣ್ಣೆಯೂ ಸರಿಯಾಗಿ ಸಿಗದ. ರೇಷನ್ ತರುವುದಾದರೂ 25 ಕಿ.ಮೀ. ನಡೆದು ಹೋಗಿಯೇ ತರಬೇಕು. ಅದಕ್ಕೂ ಹಣ ಎಲ್ಲಿಂದ ತರುವುದು? ಹಣ ಹೊಂದಿಸಿಕೊಂಡು ಹೋಗುವಷ್ಟರಲ್ಲಿ "ರೇಷನ್‌ ತೀರಿದೆ. ಮುಂದಿನ ತಿಂಗಳು ಬನ್ನಿ ದಿನಾಂಕ ಮುಗಿದಿದೆ'' ಎಂದು ತಿಳಿಸುತ್ತಾರೆ. ಮುಫತ್‌ ಅಕ್ಕಿ ಗೋದಿ ಅರ್ಧಕ್ಕರ್ಧ ಸಿಗುವುದೇ ಇಲ್ಲ. ಎಲ್ಲಿ ಮಾಯವಾಗುತ್ತದೋ.. ಸರ್ಕಾರವಾಗಲಿ, ಅಧಿಕಾರಿಗಳಾಗಲಿ, ಆರಿಸಿ ಹೋದವರಾಗಲಿ ಮುಚ್ಚಿಕೊಂಡ ಕಿವಿಯನ್ನು ತೆರೆಯುವ ಗೋಜಿಗೇ ಹೋಗಿಲ್ಲ.
ಒಂದು ಸಾತ್ವಿಕ ಆಕ್ರೋಶ, ಹತಾಶೆಯ ರೋಷ, ರಮಣನ ಮೈಮನಗಳಲ್ಲಿ ಬೆಂಕಿಯ ಝಳ ಹೊತ್ತಿಸಿತು.
ಅಪ್ಪ ಜೋರಾಗಿ ನರಳಿದ. ಅಮ್ಮನ ಅಳು ಕಟ್ಟೆಯೊಡೆಯಿತು.
"ಇಲ್ಲ, ಇನ್ನು ಯಾರು ಹೇಳಿದರೂ ಕೇಳಬಾರದು. ಶಾಲೆಯಿದ್ದರೆ ಶಾಲೆಗೆ ಹೋಗಬೇಕಾದ ತಂಗಿಯಂತೂ ಹೋದಳು. ಅಸ್ಥಿಪಂಜರವಾಗಿ ಮಲಗಿದ ಅಪ್ಪ, ಸಣಕಲ ಅಮ್ಮ, ನಾನು... ಸಾಯಬಾರದು. ನಾವೆಲ್ಲ ಖಂಡಿತ ಬದುಕಬೇಕು. ಹೌದು ಮೊದಲು ಅಪ್ಪ ಸಾಯದಂತೆ ನೋಡಿಕೊಳ್ಳಬೇಕು. ಈಗ ಗಂಜಿ ಸಿಕ್ಕರೆ ಅಪ್ಪ ಸಾಯುವುದಿಲ್ಲ..'' ಹೀಗೆ ಯೋಚಿಸಿದ ರಮಣ ಧಿಗ್ಗನೇ ಎದ್ದ. ನಿನ್ನೆ ಒಡೆದ ಕಟ್ಟಿಗೆ ತುಂಡು ಹೊರೆ ಕಟ್ಟುತ್ತ ಅಮ್ಮನೊಂದಿಗೆ ಹೇಳಿದ:
"ಅಮ್ಮ, ಪಟಾಲಿಗೆ ಹೋಗಿ ಕಟ್ಟಿಗೆ ತುಂಡು ಮಾರಿ ಒಂದು ಸೇರು ಗೋದಿ ತರುತ್ತೇನೆ. ಅಪ್ಪನಿಗೆ ಸ್ವಲ್ಪ ಸ್ವಲ್ಪ ನೀರು ಕೊಡುತ್ತಿರು. ಹೊಟ್ಟೆಗೆ ಸ್ವಲ್ಪ ಗಂಜಿ ಬಿದ್ದರೆ ಅಪ್ಪ ಬದುಕುತ್ತಾನೆ'' ಎನ್ನುತ್ತ ನಿಶ್ಚೇಷ್ಟಿತನಾಗಿ ಮಲಗಿದ್ದ ಅಪ್ಪನ ಮೈ ಮುಟ್ಟಿ ಬಾ ಬಾ ಎಂದು ಕರೆದ. ಅಪ್ಪ ಕಣ್ತೆರೆದು ನೋಡಿದ. ಒಂದು ಸಣ್ಣ ನರಳಿಕೆ ಕರೆಗೆ ಮಾರ್ದನಿಯಾಗಿ ಹೊಮ್ಮಿತು.
"ಬಾಬಾ, ಕೆಲವೇ ಘಂಟೆ. ನೀನು ಮೊದಲಿನಂತೆಯೇ ಆಗುತ್ತೀಯ. ಪಟಾಲಿಗೆ ಹೋಗಿ ಗೋದಿ ತರ್ತೀನಿ. ನಿನಗೆ ಹುಷಾರಾದ ಕೂಡಲೇ ಬೇರೊಂದು ಊರಿಗೆ ಹೊರಟು ಬಿಡೋಣ'' ಎನ್ನುತ್ತ ರಮಣ ಕಟ್ಟಿಗೆ ಹೊರೆ ಹೊತ್ತು ದಣಪೆ ದಾಟಿ ದಾರಿಗೆ ಬಂದ. ದಾಪುಗಾಲಿಡುತ್ತ ಪಟಾಲಿಗೆ ಹೊರಟ.
ರಮಣ ಪಟಾಲಿಗೆ ಬಂದು ತಲುಪಿದಾಗ 3 ಗಂಟೆ. ರಸ್ತೆ ಬದಿಯಲ್ಲೇ ಒಂದು ಕಡೆ ಕಟ್ಟಿಗೆ ತುಂಡುಗಳನ್ನು ಜೋಡಿಸಿಕೊಂಡು ಕುಳಿತ. ಓರ್ವ ಬಂದ. ಕಟ್ಟಿಗೆಯನ್ನು ಹತ್ತು ರೂಪಾಯಿಎ ಕೇಳಿದ. ಏನಿಲ್ಲೆಂದರೂ 30 ರೂಪಾಯಿಗೆ ಕಟ್ಟಿಗೆ ಮಾರಾಟವಾಗಬೇಕು. 5 ರೂ. ಬಿಟ್ಟುಕೊಡುತ್ತೇನೆ. 25 ರೂಪಾಯಿ ಕೊಡಿ' ಎಂದು ಕೇಳಿದ ರಮಣ. ಹೆಚ್ಚಿಗೆ ಆಯಿತೆಂದು ಆತ ಬಿಟ್ಟು ಹೋದ. ಮತ್ತೊಬ್ಬ 12 ರೂಪಾಯಿಗೆ ಕೇಳಿದ. ಎಷ್ಟೋ ಹೊತ್ತಿನ ನಂತರ ಮೂರನೆಯವ ಬಂದ. 15 ರೂಪಾಯಿಗೆ ಕೇಳಿದ. ರಮಣನಿಗೆ ಕಾಯಲು ಸಮಯವುಳಿದಿರಲಿಲ್ಲ. ಆಗಲೇ 6 ಗಂಟೆಯಾಗುತ್ತಾ ಬಂದಿತ್ತು. ನಿರುಪಾಯನಾಗಿ 15 ರೂಪಾಯಿಗೆ ಕಟ್ಟಿಗೆ ಮಾರಿ ಅಂಗಡಿಯಲ್ಲಿ ಒಂದು ಸೇರು ಗೋದಿ ಉಳಿದ ಹಣದಲ್ಲಿ ಪ್ಯಾಜ, ಉಪ್ಪು ಕಟ್ಟಿಸಿಕೊಂಡು, "ಎರಡು ದಿನಕ್ಕೆ ಗಂಜಿಯಾಗುತ್ತದೆ. ಗಂಜಿ ಹೊಟ್ಟೆಗೆ ಹೋದರೆ ಖಂಡಿತ ಅಪ್ಪ ಚೇತರಿಸಿಕೊಳ್ಳುತ್ತಾನೆ. ಹೆಚ್ಚು ದನ ತಡಮಾಡುವುದಲ್ಲ. ಯಾವುದಾದರೂ ದೂರದ ಊರಿಗೆ ಹೊರಟು ಬಿಡಬೇಕು'' ಎಂದು ಯೋಚಿಸುತ್ತ ರಮಣ ಊರಿನ ದಾರಿ ಹಿಡಿದ. ಕತ್ತಲಿನಲ್ಲೇ ಸಾಗಬೇಕು. ಅದು ಅವರ ಊರಿನವರಿಗೆಲ್ಲ ಅಭ್ಯಾಸ. ಐದು ತಾಸಿನ ದಾರಿ. ಬಿರುಸಾಗಿ ಹೆಜ್ಜೆ ಹಾಕುತ್ತ ಸಾಗಿದ.
ಮೈಯಿಂದ ಬೆವರು ಧಾರಾಕಾರ ಸುರಿಯುತ್ತಿತ್ತು. ನಡೆದು ನಡೆದು ಆಯಾಸವೂ ಆಗಿತ್ತು. ಆದರೂ ಅಪ್ಪನನ್ನು ಬದುಕಿಸಿಕೊಳ್ಳುತ್ತೇನೆ; ಅಮ್ಮನ ಮುಖದಲ್ಲಿ ಸಂತಸದ ಕಾಂತಿ ಮಿನುಗುವುದನ್ನು ಕಾಣುತ್ತೇನೆ ಎಂಬ ಸಮಾಧಾನ ಅವನನ್ನು ಮುನ್ನಡೆಸುತ್ತಿತ್ತು. ಅಮ್ಮನ ಮುಖದಲ್ಲಿ ನಗುವನ್ನೇ ಕಾಣದೆ ಅದೆಷ್ಟು ದಿನಗಳಾದವು! ರಮಣನ ಕಾಲುಗಳಲ್ಲಿ ದೈತ್ಯ ಶಕ್ತಿ ಬಂದಂತಾಗಿತ್ತು.

ಅಮಾಲಾಸೋಲ್‌ನಲ್ಲಿ ಊರಿನ ಕೊನೆಯಲ್ಲಿರುವ ತನ್ನ ಮನೆಗೆ ಆ ಬಂದು ಮುಟ್ಟಿದಾಗ ಸರಿ ರಾತ್ರಿ 11 ಗಂಟೆ. ದಣಪೆ ಹಾರಿ ಒಳಗೆ ಬರುತ್ತಲೇ "ಗೋದಿ ತಂದಿದ್ದೇನೆ. ಗಂಜಿ ಕಾಯಿಸು'' ಎನ್ನುತ್ತಲೇ ಬಾಗಿಲು ನೂಕಿ ಒಳಗೆ ಬಂದ. ಮೂಲೆಯಲ್ಲಿ ನಾಲ್ಕು ಕಟ್ಟಿಗೆ ತುಂಡುಹಾಕಿ ಬೆಂಕಿ ಮಾಡಿಡಲಾಗಿತ್ತು. ಅದರ ಬೆಳಕಿನಲ್ಲಿ ಒಳಗೆ ನೋಡಿದ. ಅಪ್ಪನ ಮಂಚದ ಕೆಳಗೆ ಅಮ್ಮ ಅಳುತ್ತ ಕುಳಿತಿದ್ದಳು. ರಮಣ ಅಪ್ಪನ ಮೈದಡವಿ "ಬಾಬಾ'' ಎಂದು ಕರೆದ. ಹಣೆ ಕೈ - ಕಾಲು ಮುಟ್ಟಿ ನೋಡಿದ. ತಣ್ಣಗೆ ತಣ್ಣಗೆ ಎಲ್ಲ ತಣ್ಣಗೆ. ರಮಣನಿಗೆ ತನ್ನೆಲ್ಲ ಕ್ರಿಯೆಗಳು ನಿಂತು ಹೋದಂತೆ ಭಾಸವಾಯಿತು. ಅಲ್ಲಿಯೇ ಕುಸಿದು ಕುಳಿತ.

Name : ವನರಾಗ ಶರ್ಮ ವನರಾಗ ಶರ್ಮ
Mobile no : +91-99999999999
Write Comments
*Name :
*Comment :
(Max.1000 Characters)
  
The Ultimate Job Portal

Other Episodes

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited